ನಿಸರ್ಗದತ್ತ ಮೇದಾಮ್ಲಗಳು ಹಾಗೂ ಅವುಗಳ ವ್ಯುತ್ಪನ್ನಗಳು ಮತ್ತು ಅವಕ್ಕೆ ಜೈವಸಂಶ್ಲೇಷಣೆ ಅಥವಾ ಕಾರ್ಯಮುಖೇನ ಸಂಬಂಧಿಸಿದ ಕಾರ್ಬನಿಕ ಸಂಯುಕ್ತಗಳು. ಎಸ್ಟರುಗಳು ಅಥವಾ ಅಮೈಡುಗಳು ಮೊದಲನೆಯ ಗುಂಪಿಗೂ ಪ್ರೊಸ್ಟನಾಯ್ಡುಗಳು, ಆಲಿಫ್ಯಾ ಟಿಕ್ ಈಥರುಗಳು ಅಥವಾ ಆಲ್ಕಹಾಲುಗಳು ಮತ್ತು ಕೊಲೆಸ್ಟಿರಾಲ್ ಹಾಗೂ ಸಸ್ಯಸ್ಟಿರಾಲುಗಳು ಎರಡನೆಯ ಗುಂಪಿಗೂ ಉದಾಹರಣೆಗಳು. ಸ್ಟಿರಾಯ್ಡಲ್ ಹಾರ್ಮೋನುಗಳು, ಪೆಟ್ರೋಲಿಯಮ್ ಉತ್ಪನ್ನಗಳು, ಮೇದಸ್ಸಿನಲ್ಲಿ ಲೀನಿಸುವ ಜೀವಸತ್ತ್ವಗಳು ಮತ್ತು ಅತಿವಿರಳ ಸನ್ನಿವೇಶಗಳನ್ನು ಹೊರತುಪಡಿಸಿ ಕ್ಯರೊಟೀನಾಯ್ಡುಗಳು ಅಥವಾ ಟರ್ಪೀನುಗಳನ್ನು ಲಿಪಿಡುಗಳೆಂದು ಪರಿಗಣಿಸಿಲ್ಲ. ನೀರಿನಲ್ಲಿ ಲೀನಿಸದೆ ಕಾರ್ಬನಿಕ ದ್ರಾವಕಗಳಲ್ಲಿ ಲೀನಿಸುವ ಮೇದಾಮ್ಲೀಯ ಎಸ್ಟರುಗಳು; ಚಕ್ರೀಯ ಅಥವಾ ಅಚಕ್ರೀಯ ದೀರ್ಘಸರಪಣಿ ಆಲಿಫ್ಯಾಟಿಕ್ ಹೈಡ್ರೊಕಾರ್ಬನುಗಳು ಮತ್ತು ಅವುಗಳ ವ್ಯುತ್ಪನ್ನಗಳೇ ಆಗಿರುವ ನಿಸರ್ಗದತ್ತ ಸಂಯುಕ್ತಗಳ ಒಂದು ವರ್ಗ ಎಂಬ ವ್ಯಾಖ್ಯಾನಗಳೂ ಇವೆ.

ಲಿಪಿಡುಗಳಿಗೆ ಸಂಬಂಧಿಸಿದ  ಕೆಲವು  ಪ್ರಮುಖ  ತಥ್ಯಗಳು  ಇಂತಿವೆ: 1. ಲಿಪಿಡುಗಳ  ಪೈಕಿ  ಹೆಚ್ಚಿನವು ಅಧ್ರುವೀಯ  ದ್ರಾವಕಗಳಲ್ಲಿ  ವಿಲೀನವಾಗುತ್ತವೆ, ನೀರಿನಲ್ಲಿ ಇಲ್ಲ. 2. ಲಿಪಿಡುಗಳಲ್ಲಿರುವ  ಮೇದಾಮ್ಲ ಗಳು ಪರ್ಯಾಪ್ತ ಅಥವಾ ಅಪರ್ಯಾಪ್ತ, ಚಕ್ರೀಯ ಅಥವಾ  ಅಚಕ್ರೀಯ ವಾಗಿರಬಹುದು. ಹೈಡ್ರಾಕ್ಸಿಲ್ ಅಥವಾ ಕೀಟೊಗುಂಪುಗಳಂಥ  ಆದೇಶನಗಳು ಇವುಗಳಲ್ಲಿರುತ್ತವೆ. ಎಸ್ಟರ್ ಅಥವಾ ಅಮೈಡ್ ಕೂಡಿಕೆಗಳಲ್ಲಿ ಇವು ಸಂಯೋಗವಾಗಿರುತ್ತವೆ. 3. ಲಿಪಿಡುಗಳಲ್ಲಿರುವ ಆಲ್ಕಹಾಲುಗಳೂ ಪರ್ಯಾಪ್ತ ಅಥವಾ ಅಪರ್ಯಾಪ್ತವಾಗಿರಬಹುದು. ಎಸ್ಟರ್ ಅಥವಾ ಈಥರ್ ಕೂಡಿಕೆಗಳಲ್ಲಿ ಇವು ಸಂಯೋಗವಾಗಿರುತ್ತವೆ. 4. ಲಿಪಿಡುಗಳಲ್ಲಿರುವ ಅಮೈನೊಆಲ್ಕಹಾಲುಗಳು ಅಮೈಡುಗಳು, ಗ್ಲೈಕೊಸೈಡುಗಳು, ಅಥವಾ ಫಾಸ್ಫೇಟ್ ಎಸ್ಟರುಗಳಾಗಿ ಕೂಡಿಕೆಯಾಗಿರುತ್ತವೆ. ಸ್ಫಿಂಗೊಸೈನ್ ಪ್ರಾಣಿ ಊತಕಗಳಲ್ಲಿ ಪ್ರಸಾಮಾನ್ಯವಾಗಿ ಇರುವ ಅಮೈನೊಆಲ್ಕಹಾಲ್, ಸಸ್ಯಗಳದ್ದರಲ್ಲಿ ಫೈಟೊಸ್ಫಿಂಗೊಸೈನ್. 

ಲಿಪಿಡುಗಳನ್ನು ವರ್ಗೀಕರಿಸುವ ಸರ್ವಮಾನ್ಯ ಪದ್ಧತಿ ಇಲ್ಲವಾದರೂ ಹೆಚ್ಚುಕಡಿಮೆ ಎರಡು ವರ್ಗಗಳಾಗಿ ವರ್ಗೀಕರಿಸಬಹುದು:

(ಅ) ಸರಳ ಲಿಪಿಡುಗಳು: 1. ಟ್ರೈಗ್ಲಿಸರೈಡುಗಳು ಅಥವಾ ಮೇದಸ್ಸು ಗಳು ಹಾಗೂ ಎಣ್ಣೆಗಳು. ಇವು ಗ್ಲಿಸರಾಲಿನ ಮೇದಾಮ್ಲೀಯ ಎಸ್ಟರು ಗಳು. ಉದಾ: ಹಂದಿಕೊಬ್ಬು, ಹತ್ತಿಬೀಜದೆಣ್ಣೆ, ಬೆಣ್ಣೆ. 2. ಮೇಣಗಳು. ಇವು ದೀರ್ಘಸರಪಣಿ ಆಲ್ಕಹಾಲುಗಳ ಮೇದಾಮ್ಲೀಯ ಎಸ್ಟರುಗಳು. ಉದಾ: ಜೇನುಮೇಣ, ಕಾರ್ನೌಬ ಮೇಣ (ತಾಳೆಜಾತಿಯ ಕಾರ್ನೌಬ ಮರದೆಲೆಯಿಂದ ತಯಾರಿಕೆ), ಸ್ಫರ್ಮಸೆಟಿ(ತಿಮಿಂಗಿಲದಿಂದ ತಯಾರಿಸಿದ ಎಣ್ಣೆ). 3. ಸ್ಟೀರಾಯ್ಡುಗಳು. ಇವು ಭಾಗಶಃ ಅಥವಾ ಪೂರ್ಣ ಹೈಡ್ರೊಜ ನೀಕೃತ ಫಿನಂಥ್ರೀನಿನ ವ್ಯುತ್ಪನ್ನಗಳು. ಉದಾ: ಕೊಲೆಸ್ಟಿರಾಲ್, ಎರ್ಗೊಸ್ಟಿರಾಲ್.

(ಆ) ಸಂಕೀರ್ಣ ಲಿಪಿಡುಗಳು: 1. ಫಾಸ್ಫಟೈಡುಗಳು ಅಥವಾ ಫಾಸ್ಫೊಲಿಪಿಡುಗಳು. ಇವುಗಳಲ್ಲಿ ಫಾಸ್ಫರಸ್ ಇರುತ್ತದೆ. ಅನೇಕ ಲಿಪಿಡುಗಳಲ್ಲಿ ನೈಟ್ರೊಜನ್ ಕೂಡ ಇರುತ್ತದೆ. ಉದಾ: ಲೆಸಿತಿನ್, ಸೆಫಲಿನ್. 2. ಗ್ಲೈಕೊಲಿಪಿಡುಗಳು, ಅರ್ಥಾತ್ ಕಾರ್ಬೊಹೈಡ್ರೇಟ್ ಶೇಷಗಳಿರುವ ಲಿಪಿಡುಗಳು. ಉದಾ: ಸ್ಟಿರಾಲ್ ಗ್ಲೈಕೊಸೈಡುಗಳು, ಸಸ್ಯಮೂಲದ ಫೈಟೊಗ್ಲೈಕೊಲಿಪಿಡುಗಳು. 3. ಸ್ಫಿಂಗೊಲಿಪಿಡುಗಳು ಅಥವಾ ದೀರ್ಘಸರಪಣಿ ಅಮೈನೊ ಆಲ್ಕಹಾಲ್ ಸ್ಫಿಂಗೊಸೈನ್ ಮತ್ತು ಅದರ ವ್ಯುತ್ಪನ್ನಗಳಿರುವ ಲಿಪಿಡುಗಳು. ಉದಾ: ಸೆರಮೈಡುಗಳು.

ಜೀವಿಗಳ ಕೋಶಗಳಲ್ಲಿ ಲಿಪಿಡುಗಳು ಇರುತ್ತವೆ. ಪ್ರಾಣಿಗಳ ಅಡಿಪೋಸ್ ಊತಕಗಳು, ಸಸ್ಯಬೀಜಗಳು ಮುಂತಾದ ನಿರ್ದಿಷ್ಟ ಸ್ಥಳಗಳಲ್ಲಿ ಟ್ರೈಗ್ಲಿಸರೈಡುಗಳು ಸಂಚಯವಾಗಿರುತ್ತವೆ. ಇವು ಶಕ್ತಿಯ ಉಗ್ರಾಣಗಳು. ಸಂಕೀರ್ಣ ಲಿಪಿಡುಗಳು ಹೆಚ್ಚುಕಡಿಮೆ ಸಂರಚನಘಟಕಗ ಳಾಗಿರುವಂತೆ ತೋರುತ್ತಿವೆ. ಕೋಶಪೊರೆಗಳಲ್ಲಿ ಹಾಗೂ ಕೋಶಗಳ ಒಳಗಿರುವ ವಿಶೇಷ ಕಾಯಗಳಲ್ಲಿ ಇವು ಇರುತ್ತವೆ. ಊತಕಗಳ ಕ್ರಿಯಾಶೀಲತೆಗೆ ಅನುಗುಣವಾಗಿ ಸಂಕೀರ್ಣ ಲಿಪಿಡುಗಳ ಪ್ರಮಾಣ ಇರುತ್ತದೆ. ಉದಾ: ಸ್ತನಿಗಳ ಮಿದುಳು, ಯಕೃತ್ತು, ಶ್ವಾಸಕೋಶ, ಮೂತ್ರಪಿಂಡ ಮತ್ತು ರಕ್ತದಲ್ಲಿ ಫಾಸ್ಫಟೈಡುಗಳು ಅಧಿಕ ಪ್ರಮಾಣದಲ್ಲಿ ರುತ್ತವೆ. ಸರ್ವವೇದ್ಯ ಆಕರಗಳಲ್ಲಿ ಮಾತ್ರವಲ್ಲದೆ ಕೀಟಗಳಲ್ಲಿ, ಸಸ್ಯಗಳ ಎಲೆಗಳ ಹೊರಪದರದಲ್ಲಿ, ಹಣ್ಣು ಮತ್ತು ತರಕಾರಿಗಳ ಕ್ಯೂಟಿಕಲುಗಳಲ್ಲಿ ಕೂಡ ಮೇಣಗಳು ಲಭ್ಯ. ಫಾಸ್ಫಟೈಡುಗಳನ್ನು ಸೋಯಬೀನಿನಿಂದ ವಾಣಿಜ್ಯಪ್ರಮಾಣದಲ್ಲಿ ಪಡೆಯುತ್ತಾರೆ.
	
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ